ಮಾಂಟ್ರಿಯಲ್		
ಕೆನಡ ದೇಶದ ಎರಡನೆಯ ದೊಡ್ಡ ನಗರ ಮತ್ತು ಸೆಂಟ್ ಲಾರೆನ್ಸ್ ನದೀಮುಖಜ ಭೂಮಿಯ ಪ್ರಮುಖ ಬಂದರು.  ತ್ರಿಕೋನಾ ಕಾರವಾದ ಮಾಂಟ್ರಿಯಲ್ ದ್ವೀಪದ ಮೂರನೆಯ ಒಂದು ಭಾಗ ಆವರಿಸಿರುವ ಈ ನಗರ 233 ಮೀ ಎತ್ತರವಿರುವ ಮೌಂಟ್ ರಾಯಲ್ ಪರ್ವತದ ಸುತ್ತಲೂ ಹಬ್ಬಿದೆ.  ಈ ಪರ್ವತದಿಂದಲೇ ಈ ನಗರಕ್ಕೆ ಮಾಂಟ್ರಿಯಲ್ ಎಂಬ ಹೆಸರು ಬಂದಿದೆಯೆನ್ನುವರು.  ಮಾಂಟ್ರಿಯಲ್ ಮಹಾನಗರ ಪ್ರದೇಶ ಮಾಂಟ್ರಿಯಲ್ ದ್ವೀಪ, ಜೀಸಸ್ ದ್ವೀಪ ಹಾಗೂ ಇತರ ಸಣ್ಣ ದ್ವೀಪಗಳು, ಸೆಂಟ್ ಲಾರೆನ್ಸ್ ನದಿಯ ಎರಡು ದಡಗಳು ಮತ್ತು ಕ್ಯೂಬೆಕ್‍ನ ಮುಖ್ಯ ಭೂಭಾಗವನ್ನೂ ಆವರಿಸಿಕೊಂಡಿದೆ, ಮಾಂಟ್ರಿಯಲ್ ಮಹಾನಗರ ಪ್ರದೇಶದ ವಿಸ್ತೀರ್ಣ 2673 ಚ.ಕಿಮೀ.  ಜನಸಂಖ್ಯೆ 2,865,900 (1984).

ಕೆನಡದಲ್ಲೇ ಅತ್ಯಂತ ಎತ್ತರದ ಅನೇಕ ಕಟ್ಟಡಗಳು ಮಾಂಟ್ರಿಯಲ್ ನಗರದಲ್ಲಿವೆ.  ಪ್ಲೇಸ್ ವಿಲ್ಲೆ-ಮೇರಿ ಕಟ್ಟಡ 45 ಅಂತಸ್ತುಗಳನ್ನು ಹೊಂದಿದೆ.  ಇದನ್ನು ನ್ಯೂಯಾರ್ಕ್ ನಗರದ ಸುಪ್ರಸಿದ್ಧ ರಾಕ್ಫೆಲ್ಲರ್ ಸೆಂಟರ್‍ಗೆ ಹೋಲಿಸಬಹುದು.  ಇಲ್ಲಿಯ ಭೂ ಅಂತರ್ಗತ ನಗರ ವ್ಯಾಪಾರಸಂಕೀರ್ಣ ವಿಶ್ವದಲ್ಲಿಯೇ ದೊಡ್ಡದು.  1967ರಲ್ಲಿ ಎಕ್ಸ್‍ಪೋ-67 ಅಂತಾರಾಷ್ಟ್ರೀಯ ಪ್ರದರ್ಶನ ನಡೆದ ಕಾಲದಲ್ಲಿ ಈ ನಗರದ ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು.  ಅನಂತರ ಪ್ರತಿವರ್ಷವೂ ಬೇಸಗೆಯಲ್ಲಿ ಎಕ್ಸ್‍ಪೋ ರೀತಿಯ ಪ್ರದರ್ಶನವನ್ನು `ಮಾನವ ಮತ್ತು ಅವನ ಪ್ರಪಂಚ ಎಂಬ ಹೆಸರಿನಲ್ಲಿ ಮುಂದುವರಿಸಲಾಗಿದೆ.
ಇಲ್ಲಿಯ ಸುಮಾರು ⅔ ರಷ್ಟು ಜನ ಫ್ರೆಂಚ್ ಭಾಷೆ ಮಾತನಾಡುವರು.  ಮಾಂಟ್ರಿಯಲ್ ವಿಶ್ವದಲ್ಲಿಯೇ ಫ್ರೆಂಚ್ ಮಾತನಾಡುವ ಅತ್ಯಂತ ಹೆಚ್ಚು ಜನರಿರುವ ನಗರಗಳಲ್ಲಿ ಎರಡನೆಯದು (ಮೊದಲನೆಯದು ಪ್ಯಾರಿಸ್).  ಫ್ರೆಂಚ್ ಮತ್ತು ಇಂಗ್ಲಿಷ್ ಎರಡೂ ಆಡಳಿತ ಭಾಷೆಗಳಾಗಿವೆ.  ಆದರ ಇಲ್ಲಿಯ ವ್ಯಾಪಾರ ಮತ್ತು ಕೈಗಾರಿಕೆಗಳು ಇಂಗ್ಲಿಷ್ ಮಾತನಾಡುವ ಅಲ್ಪಸಂಖ್ಯಾತರ ಹಿಡಿತದಲ್ಲಿವೆ.

ನಗರದ ಜನಸಂಖ್ಯೆಯಲ್ಲಿ ಸುಮಾರು ಮುಕ್ಕಾಲು ಭಾಗ ರೋಮನ್ ಕ್ಯಾಥೊಲಿಕ್ಕರು.  ಇವರೆಲ್ಲ ಫ್ರೆಂಚ್ ಮೂಲದವರು.  ಇಂಗ್ಲಿಷ್ ಮೂಲದವರಲ್ಲಿ ಬಹುಭಾಗ ಪ್ರಾಟೆಸ್ಟೆಂಟರು.  ಯಹೂದ್ಯರು ಇಲ್ಲಿರುವ ಮತ್ತೊಂದು ಪ್ರಮುಖ ಧಾರ್ಮಿಕ ಪಂಗಡ.

ಹಳೆಯ ಮಾಂಟ್ರಿಯಲ್ ನಗರ ಸಮುದ್ರಕ್ಕೆ ಅಭಿಮುಖವಾಗಿದ್ದು ಪುರಾತನ ಕಟ್ಟಡಗಳಿಂದಲೂ ಕಿರಿದಾದ ಓಣಿಗಳಿಂದಲೂ ಕೂಡಿದೆ.  ಇಲ್ಲಿ 300ಕ್ಕೂ ಹೆಚ್ಚು ಚರ್ಚುಗಳಿವೆ.  ಇವುಗಳಲ್ಲಿ ಅತ್ಯಂತ ಪುರಾತನವಾದದ್ದು 1771ರಲ್ಲಿ ಕಟ್ಟಲಾದ ನೋಟೆಡೇಮ್ ಡಿ ಬಾನ್-ನಿಕೊಸ್ಸ್ ಎಂಬ ರೋಮನ್ ಕ್ಯಾಥೊಲಿಕ್ ಚರ್ಚ್.  `ನಾವಿಕರ ಚರ್ಚು ಎಂದೂ ಹೆಸರಾದ ಈ ಚರ್ಚಿನ ಮೇಲೆ ಮೇರಿ ಕನ್ನಿಕೆಯ ವಿಗ್ರಹವಿದ್ದು ಈಕೆ ನಾವಿಕರನ್ನು ರಕ್ಷಿಸುವಳೆಂಬ ನಂಬಿಕೆಯಿದೆ.  ಮೇರಿಯ ಕಥೀಡ್ರಲ್-ಬ್ಯಾಸಿಕಾಚರ್ಚನ್ನು ವ್ಯಾಟಿಕನ್ ನಗರದ ಸೆಂಟ್ ಪೀಟರ್ ಚರ್ಚಿನ ಮಾದರಿಯಲ್ಲಿ ಕಟ್ಟಲಾಗಿದೆ.  ನಗರದ ದಕ್ಷಿಣ ಭಾಗದಲ್ಲಿ 1685ರಲ್ಲಿ ತೆರೆಯಲಾದ ಸೆಂಟ್ ಸುಲ್ಪೆಸ್ ಸೆಮಿನರಿ ಇದೆ.  ಇವಲ್ಲದೆ ಸೆಂಟ್ ಪ್ಯಾಟ್ರಿಕ್ ಚರ್ಚ್ ನೋಟ್ರೆಡೇಮ್ ಪ್ಯಾರಿಸ್ ಚರ್ಚ್ ಮುಂತಾದವು ಇವೆ.
ಆರ್ಥಿಕತೆ: ಮಾಂಟ್ರಿಯಲ್ ನಗರ ಸೆಂಟ್ ಲಾರೆನ್ಸ್ ನದಿ ಸಮುದ್ರ ಸೇರುವ ಸ್ಥಳದಲ್ಲಿರುವುದರಿಂದ ಇದು ವಿಶ್ವದ ಒಳನಾಡಿನ ಉತ್ತಮ ಬಂದರುಗಳಲ್ಲೊಂದು.  ಸುಲಭವಾಗಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ದೊರಕುವುದರಿಂದ ಅನೇಕ ಕೈಗಾರಿಕೆಗಳು ಸ್ಥಾಪಿತವಾಗಿದೆ.  ಶುದ್ಧೀಕರಣ ಮತ್ತು ಆಹಾರ ಸಂಸ್ಕರಣ ಬೀರ್, ಡಬ್ಬಿ ಆಹಾರ, ಸಕ್ಕರೆ, ಬಟ್ಟೆ, ಹೊಗೆಸೊಪ್ಪಿನ ತಯಾರಿಕೆಗಳು ಸಾರಿಗೆ ಉಪಕರಣಗಳು ಇಲ್ಲಿ ತಯಾರಿಕೆಗೂ ಪ್ರಸಿದ್ಧವಾಗಿದೆ.  ಒಟ್ಟಿನಲ್ಲಿ ಇಲ್ಲಿ 7000ಕ್ಕೂ ಹೆಚ್ಚು ಕೈಗಾರಿಕೆಗಳಿದ್ದು ಕ್ಯೂಬೆಕ್ ಪ್ರದೇಶದ ಒಟ್ಟು ಕೈಗಾರಿಕಾ ಉತ್ಪಾದನೆಯ 2/3 ಭಾಗದಷ್ಟು ಉತ್ಪಾದನೆಯಾಗುತ್ತದೆ.
ಕೆನಡದ ವಿದೇಶಿ ವ್ಯಾಪಾರದ ಶೇಕಡಾ 20ರಷ್ಟು ಆಮದು ಮತ್ತು ಶೇಕಡಾ 10ರಷ್ಟು ರಫ್ತು ಮಾಂಟ್ರಿಯಲ್‍ನ ಮೂಲಕ ನಡೆಯುತ್ತದೆ.  ಇಲ್ಲಿಯ ಭೂ ಅಂತರ್ಗತ ವ್ಯಾಪಾರ ಸಂಕೀರ್ಣಗಳೂ ರಸ್ತೆಗಳೂ ಚಳಿಗಾಲದಲ್ಲಿ ನಡೆಯಲು ನೆರವಾಗಿವೆ.  ವ್ಯಾಪಾರ ಸಂಕೀರ್ಣಗಳೂ ರಸ್ತೆಗಳೂ ಚಳಿಗಾಲದಲ್ಲಿ ನಡೆಯಲು ನೆರವಾಗಿವೆ.  ವ್ಯಾಪಾರ ಎಂದಿನಂತೆ ಪ್ರತಿವರ್ಷ ನವೆಂಬರ್‍ನಿಂದ ಏಪ್ರಿಲ್ ತನಕ.  ಈ ನಗರದಲ್ಲಿ ಆಗಾಧ ಹಿಮ ಬೀಳುವುದರಿಂದ ಅದನ್ನು ರಸ್ತೆಗಳಿಂದ ತೆಗೆಯಲು 5 ರಿಂದ 8 ದಶಲಕ್ಷ ಡಾಲರು ವೆಚ್ಚವಾಗುತ್ತದೆ.

ಸಾರಿಗೆ: ಸೆಂಟ್ ಲಾರೆನ್ಸ್ ನದಿ ಮಾಂಟ್ರಿಯಲ್ ನಗರವನ್ನು ಅಟ್ಲಾಂಟಿಕ್ ಸಾಗರದೊಂದಿಗೆ ಸಂಪರ್ಕಿಸುತ್ತದೆ.  ಒಳನಾಡಿನಲ್ಲಿಯೂ ಸೆಂಟ್ ಲಾರೆನ್ಸ್ ಜಲಮಾರ್ಗ 2090 ಕಿಮೀ ದೂರ ಪ್ರಯಾಣ ಮಾಡಲು ಅನುಕೂಲವಾಗಿದೆ.  ಮಾಂಟ್ರಿಯಲ್ ಬಂದರಿನಲ್ಲಿ 4000ಕ್ಕೂ ಹೆಚ್ಚು ಹಡಗುಗಳು ಪ್ರತಿವರ್ಷ ತಂಗುತ್ತವೆ ಹಾಗೂ ಪ್ರತಿವರ್ಷ 17 ದಶಲಕ್ಷ ಮೆಟ್ರಿಕ್ ಟನ್‍ಗಳಿಗೂ ಹೆಚ್ಚು ಸರಕು ಸಾಗಾಣಿಕೆಯಾಗುತ್ತದೆ.  ಮಾಂಟ್ರಿಯಲ್ ಕೆನಡದ ರೈಲು ವಿಮಾನ ಹಾಗೂ ರಸ್ತೆ ಪ್ರಯಾಣದ ಪ್ರಮುಖ ಕೇಂದ್ರ..

ಶಿಕ್ಷಣ: ಮಾಂಟ್ರಿಯಲ್‍ನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ನಿರ್ಮಿತವಾಗಿದೆ.  1876ರಲ್ಲಿ ಪ್ರಾರಂಭವಾದ ಮಾಂಟ್ರಿಯಲ್ ವಿಶ್ವವಿದ್ಯಾಲಯ ಮತ್ತು 1968ರಲ್ಲಿ ಪ್ರಾರಂಭವಾದ ಕ್ಯೂಬೆಕ್ ವಿಶ್ವವಿದ್ಯಾಲಯ ಫ್ರೆಂಚ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತವೆ.  1821ರ ಸರ್‍ಜಾರ್ಜ್ ವಿಲಿಯಮ್ಸ್ ವಿಶ್ವವಿದ್ಯಾಲಯ ಇಂಗ್ಲಿಷಿನಲ್ಲಿ ಶಿಕ್ಷಣ ನೀಡುತ್ತದೆ.

ಮಾಂಟ್ರಿಯಲ್ ಉತ್ತರ ಅಮೆರಿಕದ ಪ್ರಮುಖ ಸಾಂಸ್ಕøತಿಕ ಕೇಂದ್ರಗಳಲ್ಲೊಂದು.  ಇಲ್ಲಿ ಅನೇಕ ಚಿತ್ರ ಶಾಲೆಗಳೂ ವಸ್ತುಸಂಗ್ರಹಾಲಯಗಳೂ ಕಲಾಮಂದಿರಗಳೂ ಇವೆ.  ಈ ನಗರದಲ್ಲಿರುವ ಮಾಂಟ್ರಿಯಲ್ ಸಿಂಪೋನಿ ಆರ್ಕೆಸ್ಟ್ರಾ ವಿಶ್ವವಿಖ್ಯಾತವಾಗಿದೆ.  ನಗರ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿದ್ದು ಪ್ರತಿವರ್ಷ ಸುಮಾರು 4 ದಶಲಕ್ಷ ಪ್ರವಾಸಿಗಳು ಭೇಟಿ ನೀಡುತ್ತಾರೆ. 

ಇತಿಹಾಸ: ಫ್ರಾನ್ಸಿನ ಜಾಕ್ವಿಸ್ ಕಾರ್ಟಿಯರ್ 1535ರಲ್ಲಿ ಈ ಪ್ರದೇಶಕ್ಕೆ ಬಂದಾಗ ಇಲ್ಲಿ ಇಂಡಿಯನ್ನರು ವಾಸಿಸುತ್ತಿದ್ದ ಹೊಚೆಲಾಗಾ ಗ್ರಾಮವಿತ್ತು.  ಮತ್ತೊಬ್ಬ ಫ್ರೆಂಚ್ ಸಾಹಸಿ ಸಾಮ್ಯುಯಲ್ ಡಿ ಚಾಂಪ್ಲೆಸ್ 1603 ಮತ್ತು 1611ರಲ್ಲಿ ಇಲ್ಲಿಗೆ ಭೇಟಿ ಕೊಟ್ಟ..  1642ರಲ್ಲಿ ಪಾಲ್ ಡಿ ಚೊಮೆಡ್ ನೇತೃತ್ವದಲ್ಲಿ ಪಾದ್ರಿಗಳು.  ನನ್‍ಗಳೂ ಹಾಗೂ ವಲಸೆಗಾರರ ಗುಂಪು ಇಲ್ಲಿ ಬಂದು ವಿಲ್ಲೆ-ಮೇರಿ, ವಸಾಹತುವನ್ನು ಸ್ಥಾಪಿಸಿದರು.  1760ರ ತನಕ ಇದು ಫ್ರೆಂಚರ ಅಧೀನದಲ್ಲಿದ್ದು ಅನಂತರ ಬ್ರಿಟಿಷರ ವಶವಾಯಿತು.  1775ರಲ್ಲಿ ಅಮೆರಿಕನ್ ಕ್ರಾಂತಿಯ ಸಮಯದಲ್ಲಿ ಜನರಲ್ ರಿಚರ್ಡ್ ಮಾಂಟಿಗೊಮರಿ ಮುಂದಾಳುತನದಲ್ಲಿ ಅಮೆರಿಕನ್ ಸೈನ್ಯ ಮಾಂಟ್ರಿಯಲ್ ನಗರವನ್ನು ವಶಪಡಿಸಿಕೊಂಡಿತು.  ಜೂನ್ 1776ರಲ್ಲಿ ಇದು ಮತ್ತೆ ಬ್ರಿಟಿಷರ ಸ್ವಾಧೀನವಾಯಿತು.  1844ರಿಂದ 1849ರ ತನಕ ಮಾಂಟ್ರಿಯಲ್ ಸಂಯುಕ್ತ ಕೆನಡದ ರಾಜಧಾನಿಯಾಗಿತ್ತು.

ಇಪ್ಪತ್ತನೆಯ ಶತಮಾನದ ವೇಳೆಗೆ ನಗರದ ಜನಸಂಖ್ಯೆ 2,70,000ಕ್ಕೆ ಏರಿ ನಗರದ ಹೊರವಲಯದ ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳನ್ನು ಮಾಂಟ್ರಿಯಲ್‍ನಲ್ಲಿ ವಿಲೀನ ಗೊಳಿಸಲಾಯಿತು.  1908ರಲ್ಲಿ ಈ ನಗರ ಸೆಂಟ್ ಹೆಲೆನ್ ದ್ವೀಪವನ್ನು ಖರೀದಿಮಾಡಿತು.

ಎರಡು ಮಹಾಯುದ್ಧಗಳು ಉತ್ತರ ಅಮೆರಿಕದ ಇತರ ಕೈಗಾರಿಕಾ ಕೇಂದ್ರಗಳ ಆರ್ಥಿಕ ಬೆಳೆವಣಿಗೆ ಪ್ರಚೋದನೆ ನೀಡಿದಂತೆ ಮಾಂಟ್ರಿಯಲ್‍ಗೂ ನೀಡಿತು.  1959ರಲ್ಲಿ ಮಾಂಟ್ರಿಯಲ್‍ನಲ್ಲಿ ಮೆಟ್ರೋಪೊಲಿಟನ್ ಕಾಪೋರೇಷನ್ ಸ್ಥಾಪಿತವಾಯಿತು.

1950ರ ಪ್ರಾರಂಭದ ವೇಳೆಗೆ ನಗರದ ಜನಸಂಖ್ಯೆ ಒಂದು ದಶಲಕ್ಷಕ್ಕೂ ಮೀರಿತು.  1960ರ ತನಕ ನಗರದ ಆರ್ಥಿಕ ಅಭಿವೃದ್ಧಿಯೂ ತೀವ್ರವಾಯಿತು.  ನಗರದ ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ಕಟ್ಟಲಾಯಿತು.  1975ರಲ್ಲಿ ತೆರೆಯಲಾದ ಮಾಂಟ್ರಿಯಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಶ್ವದಲ್ಲೇ ಅತಿದೊಡ್ಡದಾದ (375 ಚ.ಕಿಮೀ) ವಿಸ್ತೀರ್ಣ ಹೊಂದಿದೆ.                                                   
 (ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ